ಪರ್ಮಿಯನ್
ಭೂವಿಜ್ಞಾನ ಕಾಲಮಾಪನದಲ್ಲಿ ಪೇಲಿಯೊಜೋಯಿಕ್ (ಪ್ರಾಚೀನ ಜೀವ) ಕಲ್ಪದ ಕೊನೆಯ ಯುಗದ ಹಾಗೂ ಆ ಅವಧಿಯಲ್ಲಿ ರೂಪುಗೊಂಡ ಶಿಲಾಸ್ತೋಮಗಳ ಹೆಸರು. ಇಂಗ್ಲೆಂಡಿನಲ್ಲಿ ಕಲ್ಲಿದ್ದಲ ಸ್ತರಗಳ ಮೇಲೆ ಸಂಚಯನಗೊಂಡಿರುವ ನಿಕ್ಷೇಪದ ಬಣ್ಣ ಕೆಂಪು. ಇದರಲ್ಲಿ ಮರಳುಶಿಲೆಯೇ ಹೆಚ್ಚು ಬಣ್ಣ ಮತ್ತು ಶಿಲಾಸಂಯೋಜನಗಳಲ್ಲಿ ಈ ಶಿಲೆಗಳು ಕಾರ್ಬಾನಿಫೆರಸ್ ಸ್ತೋಮಗಳ ಕೆಳಗಿರುವ ಹಳೆ ಕೆಂಪು ಮರಳು ಶಿಲಾವರ್ಗವನ್ನು ಹೋಲುತ್ತವೆ. ಆದ್ದರಿಂದ ಬಹಳ ಕಾಲದತನಕ ಇವನ್ನು ಕೂಡ ಹಳೆಕಂಪು ಮರಳುಶಿಲಾವರ್ಗಕ್ಕೆ ಸೇರಿದವೆಂದು ಭಾವಿಸಲಾಗಿತ್ತು ಕಾರ್ಬಾನಿಫೆರಸ್ ಸ್ತೋಮಗಳು ನಿಕ್ಷೇಪಗೊಂಡಿರದ ಎಡೆಗಳಲ್ಲಿ ಈ ಶಿಲೆಗಳು ನೇರವಾಗಿ ಹಳೆ ಕೆಂಪು ಮರಳು ಶಿಲೆಗಳ ಮೇಲೆ ಸಂಚಯನಗೊಂಡಿವೆ. ಅಲ್ಲಿ ಇವನ್ನು ಇವುಗಳಲ್ಲಿರುವ ಫಾಸಿಲುಗಳಿಂದ ಮಾತ್ರ ಗುರ್ತಿಸಬಹುದು. ಕಾರ್ಬಾನಿಫೆರಸ್ ಸ್ತೋಮಗಳ ಮೇಲೆ ನಿಕ್ಷೇಪಗೊಂಡಿರುವಂಥವುಗಳಿಗೆ ಹೊಸ ಕೆಂಪು ಮರಳು ಶಿಲಾವರ್ಗ ಎಂದು ಹೆಸರು. ಇದನ್ನು ಫಾಸಿಲುಗಳ ಆಧಾರದ ಮೇಲೆ ಎರಡು ಸ್ತೋಮಗಳಾಗಿ ವಿಭಾಗಿಸಲಾಗಿದೆ. ಕೆಳಸ್ತೋಮ ಪ್ರಾಚೀನ ಜೀವಕಲ್ಪದ ಕೊನೆಯ ಭಾಗವನ್ನು ಮೇಲಿನಸ್ತೋಮ ಮಧ್ಯಜೀವಿಕಲ್ಪದ ಆದಿಭಾಗವನ್ನು ಪ್ರತಿನಿಧಿಸುತ್ತವೆ.
ಜರ್ಮನಿಯ ಹೊಸ ಕೆಂಪು ಮರಳು ಶಿಲಾವರ್ಗದಲ್ಲಿ ಬೆಲೆಬಾಳುವ ಅನೇಕ ನಿಕ್ಷೇಪಗಳಿವೆ. ಎಚ್.ಬಿ ಗೈನಿಟ್ಸ್ ಈ ಶಿಲಾವರ್ಗದಲ್ಲಿ ಐದು ಸ್ಪಷ್ಟ ಭಾಗಗಳನ್ನು ಗುರುತಿಸಿದ್ದಾನೆ (1861). ಅವುಗಳ ಪೈಕಿ ಕೆಳಗಿನ ಎರಡು ಭಾಗಗಳಲ್ಲಿ ಪ್ರಾಗ್ಚೀವ ಕಲ್ಪದ ಪರ್ಮಿಯನ್ ಫಾಸಿಲುಗಳೂ ಮೇಲಣ ಮೂರು ಭಾಗಗಳಲ್ಲಿ ಮಧ್ಯ ಜೀವಿಕಲ್ಪದ ಟ್ರಯಾಸಿಕ್ ಫಾಸಿಲುಗಳೂ ಇವೆ. ಪರ್ಮಿಯನ್ ಸ್ತೋಮ ಎರಡು ಸ್ಪಷ್ಟಭಾಗಗಳಿಂದ ಕೂಡಿರುವ ಪ್ರಯುಕ್ತ ಮಕಾವ್ ಅದನ್ನು ಡ್ಯಾಸ್ (ಇಮ್ಮಡಿ ಶಿಲಾವರ್ಗ) ಎಂದು ಕರೆದಿದ್ದಾನೆ. ಅದೇ ಕಾರಣದಿಂದ ಉಳಿದ ಹೊಸಕೆಂಪುಮರಳು ಶಿಲಾವರ್ಗವನ್ನು ಜಿನಿವೆ ಎಂಬಾತ ಟ್ರಯಾಸಾ (ಮುಮ್ಮಡಿ) ಎಂದು ಕರೆದಿದ್ದಾನೆ. 

ಡ್ಯಾಸ್ ಸ್ತೋಮದ ಕೆಳಭಾಗಕ್ಕೆ ರೊತ್ಲಿಜಂಡೆ ಎಂದೂ ಮೇಲುಭಾಗಕ್ಕೆ ಜೆಕ್ಸ್ ಟೀನ್ ಎಂದೂ ಹೆಸರು. ಕೆಳಭಾಗ ಪರಸ್ಪರ ಸಂಪರ್ಕವಿಲ್ಲದ ಆದರೆ ಸಮುದ್ರಸಂಪರ್ಕವುಳ್ಳ ಉಪ್ಪು ನೀರಿನ ಸರೋವರಗಳಲ್ಲಿ ಸಂಚಯನಗೊಂಡ ನಿಕ್ಷೇಪ. ಇದರಲ್ಲಿ ಮರಳು ಶಿಲೆಯೇ ಪ್ರಧಾನವಾದದ್ದು. ಈ ಶಿಲೆಯಲ್ಲಿ ಪ್ರಾಣಿ ಮತ್ತು ಸಸ್ಯಾವಶೇಷಗಳು ಹೇರಳವಾಗಿವೆ. ಅವುಗಳಲ್ಲಿ ಅರ್ಕಿಗೊಸಾರಸ್ ಎಂಬ ದ್ವಿಚರಪ್ರಾಣಿ, ಈಸ್ತೇರಿಯ ಎಂಬ ಸಂಧಿಪದಿ ಮತ್ತು ವಾಲ್ಜಿಯ ಎಂಬ ಕೋನಿಫೆರ ಮುಖ್ಯವಾದವು. ಮೇಲುಭಾಗ ಜೇಡುಶಿಲೆಯಿಂದ ಆರಂಭವಾಗುತ್ತದೆ, ಇದರಲ್ಲಿ ಜರ್ಮನಿಯ ಪ್ರಸಿದ್ಧ ತಾಮ್ರದ ಅದರು ಉಂಟು. ಆದ್ದರಿಂದ ಇದಕ್ಕೆ ಕ್ಯೂಪರ್‍ಸ್ಕೀಫರ್ ಎಂಬ ಹೆಸರು ಬಂದಿದೆ. ಇದರ ಮೇಲ್ಗಡೆ ಸುಣ್ಣಶಿಲೆ ಉಂಟು. ಇದಕ್ಕೆ ಜೆಕ್‍ಸ್ಟೀನ್ ಎಂದು ಹೆಸರು. ಪರ್ಮಿಯನ್ ಕಾಲದ ಸಾಗರವಾಸಿ ಆಕಶೇರುಕಗಳ ಅವಶೇಷಗಳ ಬೀಡು ಇದೇ. ಉಪ್ಪುನೀರಿನ ಸರೋವರಗಳ ಬತ್ತುವಿಕೆಯಿಂದ ಸುಣ್ಣಶಿಲೆಯ ಮೇಲೆ ಜಿಪ್ಸಮ್, ಅನೈಡ್ರೈಟ್ ಮತ್ತು ಡಾಲೊಮೈಟುಗಳ ನಿಕ್ಷೇಪವಾಗಿದೆ. ಈ ಬತ್ತುವಿಕೆಯಿಂದ ಸರೋವರಗಳಲ್ಲಿದ್ದ ಜೀವಿಗಳೆಲ್ಲ ನಿರ್ನಾಮಹೊಂದಿವೆ.

ಮರ್ಚಿಸನ್ ಮತ್ತು ಸೆಡ್ಜ್‍ವಿಕ್ ಎಂಬವರು ಬ್ರಿಟಿಷ್ ದ್ವೀಪಗಳ ಪರ್ಮಿಯನ್ ಸ್ತೋಮದ ಪರಿಶೋಧನೆಯ ಬಳಿಕ ಈ ಸ್ತೋಮ ಮತ್ತೆಲ್ಲಿಯಾದರೂ ಉತ್ಕøಷ್ಟ ರೀತಿಯಲ್ಲಿ ನಿಕ್ಷೇಪಗೊಂಡಿದೆಯೇ ಎಂದು ಹುಡುಕಲಾರಂಭಿಸಿದರು. ಎಲ್ಲ ಕಡೆಗಳಲ್ಲಿಯೂ ಅವು ಅತಿಯಾಗಿ ಕಲಕಲ್ಟಟ್ಟಿದ್ದುವು. ಆದರೆ ರಷ್ಯದಲ್ಲಿಯ ಸ್ತೋಮಗಳು ಉತ್ತಮ ಸ್ಥಿತಿಯಲ್ಲಿವೆ ಎಂದು ತಿಳಿದುಬಂದಿತು. ರಷ್ಯದ ಝಾರನ ಆಹ್ವಾನದ ಮೇಲೆ ಮರ್ಚಿಸನ್ ಆ ದೇಶದ ಕಾಂಟ್ ಕೈಸರ್‍ಲಿಂಗ್ ಮತ್ತು ತನ್ನ ಸಹಪಾಠಿ ಫ್ರಾನ್ಸಿನ ವರ್ನಿಯಲ್ ಒಡಗೂಡಿ ಆ ಸ್ತೋಮವನ್ನು ಪರಿಶೋಧಿಸಿದ. ರಷ್ಯದಲ್ಲಿ ಕಲ್ಲಿದ್ದಲ ಸ್ತರಗಳ ಮೇಲೆ ನಿಕ್ಷೇಪಗೊಂಡಿರುವ ಶಿಲೆಗಳು ಇಂಗ್ಲೆಂಡ್ ಮತ್ತು ಜರ್ಮನಿಯಲ್ಲಿನವುಗಳಿಗಿಂತ ಬೇರೆ. ಅವು ಕೆಂಪು ಮರಳುಶಿಲೆಗಳು. ಹೇರಳವಾದ ಫಾಸಿಲುಗಳಿಂದ ಕೂಡಿದ ಸಾಗರ ನಿಕ್ಷೇಪಗಳು ಅವನ್ನು ಮೊದಲು ಪರ್ಮ್ ಪ್ರಾಂತದಲ್ಲಿ ಪರಿಶೋಧಿಸಿದ್ದರಿಂದ ಅವುಗಳಿಗೆ ಪರ್ಮಿಯನ್ ಸ್ತೋಮ ಎಂಬ ಹೆಸರು ಕೊಡಲಾಯಿತು. ಈ ಸ್ತೋಮ ಯೂರೋಪ್ ಖಂಡದ ಪರ್ಮಿಯನ್ ಸ್ತೋಮಗಳಿಗೆ ಮಾದರಿ ಎನಿಸಿದೆ. ಆ ಸ್ತೋಮದ ವಿಭಜನೆ ಹೀಗಿದೆ:

ಮೇಲುಭಾಗ ಅಥವಾ ತುರಂಗಿಯನ್
ಪರ್ಮಿಯನ್ ಸ್ತೋಮ				ಮಧ್ಯಭಾಗ ಅಥವಾ ಪಂಜಾಬಿಯನ್
ಕೆಳಭಾಗ ಅಥವಾ ಆರ್ಟಿನ್ಸಿಕಿಯನ್

ಆರ್ಟಿನ್ಸಿಕಿಯನ್ ಶ್ರೇಣಿ ಸಾಗರದಡಿ ನಿಕ್ಷೇಪಗೊಂಡ ಮರಳುಶಿಲೆ ಅಥವಾ ಸುಣ್ಣ ಶಿಲೆಗಳಿಂದ ಕೂಡಿದೆ, ಅವುಗಳಲ್ಲಿ ವಿವಿಧ ವರ್ಗಕ್ಕೆ ಸೇರಿದ ಪ್ರಾಣಿಗಳ ಮತ್ತು ಸಸ್ಯಗಳ ಅವಶೇಷಗಳು ಹೇರಳವಾಗಿವೆ. ಸ್ವಾರಸ್ಯಕರ ಅಂಶವೆಂದರೆ ಪ್ರೊಡಕ್ಟಸ್ ಮತ್ತು ನಿಯೊಸ್ಕ್ವಾಜರೈನಗಳು ಮೆಡ್ಲಿಕಾಟಿಯ ಮತ್ತು ಪಾಪಿನೊಸೆರಾಸ್ ಎಂಬ ಅಮ್ಮೊನೈಟುಗಳ ಜೊತೆಯಲ್ಲಿವೆ. ಇವುಗಳ ಮಧ್ಯದಲ್ಲಿರುವ ಕಲ್ಲಿದ್ದಲು ಸ್ತರದಲ್ಲಿ ಪರ್ಮಿಯನ್ ಕಾಲದ ಸಸ್ಯಾವಶೇಷಗಳಿವೆ. ಪಂಚಾಬಿಯನ್ ಶ್ರೇಣಿ ಜಿಪ್ಸಮ್ ಮತ್ತು ಅನೈಡ್ರೈಟ್ ನಿಕ್ಷೇಪಗಳಿಂದ ಕೂಡಿದೆ. ತುರಂಗಿಯನ್ ಶ್ರೇಣಿಯಲ್ಲಿ ಮಾರಲ್ ಮತ್ತು ಕೆಂಪು ಮರಳು ಶಿಲೆಗಳು ಮೊದಲಾದ ಭೂನಿಕ್ಷೇಪಗಳು ಜಾಸ್ತಿ. ಇವುಗಳಲ್ಲಿ ಆಫ್ರಿಕಾದ ಪೆರಿಯಸಾರಸ್, ಸ್ಕಾಟ್ಲೆಂಡಿನ ಗಾರ್ಡೊನಿಯ ಮತ್ತು ದ್ವಿನಿಯ ಎಂಬ ಲ್ಯಾಬಿರಿಂತೊಡಾಂಟ್ ಜಾತಿಯ ದ್ವಿಚರಪ್ರಾಣಿಗಳ ಅವಶೇಷಗಳಿವೆ. ಲೆಪಿಡೊಡೆಂಡ್ರಾನ್, ಕಾಲಿಪ್ಟರಿಸ್ ಎಂಬ ಸಸ್ಯಗಳ ಗೊಂಡವಾನ ಖಂಡದ ಸಸ್ಯಗಳಾದ ಗ್ಲಾಸಾಪ್ಟರಿಸ್, ಗಂಗಮಾಪ್ಟರಿಸ್ ಮತ್ತು ಟೇನಿಯಾಪ್ಟರಿಸುಗಳೊಡನೆ ಇವೆ.

ಪರ್ಮಿಯನ್ ಸ್ತೋಮದ ಪ್ರತ್ಯೇಕತೆಯ ಆವಶ್ಯಕತೆ : ಎಚ್.ಬಿ.ವುಡ್‍ವರ್ಡ್, ಜಿ.ಜಿ. ಗೋಲ್ಡ್‍ಚೈಲ್ಡ್ ಮತ್ತು ಜೂಕ್ಸ್ ಎಂಬವರು ಪರ್ಮಿಯನ್ ಎಂಬ ಒಂದು ಬೇರೆ ಹೆಸರಿನ ಸ್ತೊಮವೇ ಇರಬೇಕಾಗಿಲ್ಲ ಎಂದಿದ್ದಾರೆ. ಈ ಸ್ತೋಮವನ್ನು ನಿರ್ಮಿಸಲು ಫಾಸಿಲುಗಳನ್ನು  ಆಧಾರವಾಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಅವರ ಅಭಿಪ್ರಾಯ. ಕೋನಿಬೇರ್ ಮತ್ತು ಫಿಲಿಪ್ಸ್ ಎಂಬವರು ಇಡೀ ಕೆಂಪು ಮರಳು ಶಿಲಾವರ್ಗ ಚುಕ್ಕೆಗಳಿಂದ ಕೂಡಿರುವ ಪ್ರಯುಕ್ತ ಅದನ್ನು ಪಾಯ್ಕಿಲಿಟಿಕ್ ಸ್ತೋಮ ಎಂದು ಕರೆಯುವುದು ಯುಕ್ತ ಎಂದಿರುವರು. ವುಡ್‍ವರ್ಡ್ ಮತ್ತು ಇತರರು ಇದನ್ನು ಒಪ್ಪಿದ್ದಾರೆ. ಸಿ.ಆರ್.ಕೆಯೆಸ್ ಎಂಬಾತ ಪರ್ಮಿಯನ್ ಶಿಲೆಗಳು ಕಾರ್ಬಾನಿಫೆರಸ್ ಸಾಗರಗಳ ಆಳವಿಲ್ಲದ ಪ್ರದೇಶಗಳಲ್ಲಿ ಸಂಚಯನಗೊಂಡ ನಿಕ್ಷೇಪ ಎಂದಿರುವನು. ನಾಯ್ನಿಸ್ಕಿ, ಯಕೊವೆಲೆವ್ ಮತ್ತು ಸೆರ್ಲಾಕ್ ಎಂಬವರ ಅಭಿಪ್ರಾಯವಾದರೂ ಇದೇ.

ಪರ್ಮಿಯನ್ ಸ್ತೋಮವನ್ನು ಪರ್ವತಗಳ ಅವತರಣಿಕೆ, ಶಿಲಾಪೇರಿಕೆಯ ಕ್ರಮ ಮತ್ತು ಫಾಸಿಲುಗಳ ಆಧಾರಗಳ ಮೇಲೆ ನಿರ್ಮಿಸಲಾಗಿದೆ. ಈ ಕಾಲದಲ್ಲಿ ಪ್ರಾಚೀನ ಜೀವಿಕಲ್ಪದ ನಿಕ್ಷೇಪ ಪ್ರದೇಶಗಳೆಲ್ಲ ಮೇಲೊಗೆಯಲ್ಪಟ್ಟು ಪರ್ವತಪ್ರದೇಶಗಳಾದುವುವು. ಏಷ್ಯ, ಯೂರೋಪ್ ಖಂಡಗಳಲ್ಲಿ ಹಸಿರ್ಷೀನಿಯನ್, ವಾರ್ಸಿಕನ್, ಆರ್ಮೋರಿಕನ್ ಮತ್ತು ಯೂರಲ್ ಪರ್ವತಗಳು ಉದಯಿಸಿದುವು. ಹೀಗೆ ಭೂ ಜಲಗಳ ಪ್ರಮಾಣದಲ್ಲಿ ಅಸ್ತವ್ಯಸ್ತವಾದ್ದರಿಂದ ಜಲಪರಿಚಲನೆಯ ನಿಯಮಕ್ಕೆ ಧಕ್ಕೆಯುಂಟಾಯಿತು. ಇದು ವಾಯುಗುಣದ ತೀವ್ರತೆಗಳಿಗೆ ಎಡೆಕೊಟ್ಟಿತು. ಉತ್ತರಾರ್ಧದಲ್ಲಿ ಅತಿ ಉಷ್ಣವಾಯುಗುಣವಿದ್ದರೆ ಗೊಂಡವಾನ ಖಂಡ ನೀರ್ಗಲ್ಲು ನದಿಗಳಿಂದ ಮುಚ್ಚಲ್ಟಟ್ಟಿದ್ದಿತು. ಈ ಎರಡು ಬಗೆಯ ತೀವ್ರ ವಾಯುಗುಣವೂ ಜೀವರಾಶಿಯ ಮೇಲೆ ದುಷ್ಪರಿಣಾಮಗಳನ್ನು ಉಂಟುಮಾಡಿವೆ.

ಪರ್ಮಿಯನ್ ಸ್ತೋಮಗಳಲ್ಲಿ ಸಾಗರದ ಆಳನಿಕ್ಷೇಪಗಳೇ ಅಲ್ಲದೆ ನೀರ್ಗಲ್ಲು ನಿಕ್ಷೇಪಗಳು, ಸರೋವರ ನಿಕ್ಷೇಪಗಳು, ಸಮುದ್ರಸಂಪರ್ಕ ಹೊಂದಿದ ಉಪ್ಪುನೀರಿನ ಸರೋವರದ ನಿಕ್ಷೇಪದ ಬಹುಮುಖ ನಿಕ್ಷೇಪಗಳಿವೆ. ಅಲ್ಲದೆ ಅವುಗಳಲ್ಲಿ ಜಿಪ್ಸಮ್ ಉಪ್ಪು ಮತ್ತು ರಂಜಕ ನಿಕ್ಷೇಪಗಳೂ ಉಂಟು. ಈ ಶಿಲೆಗಳಲ್ಲಿರುವ ಪ್ರಾಣಿಗಳು ಬಲುಮಟ್ಟಿಗೆ ಗುಜ್ಜಾರಿಗಳು. ದೀರ್ಘಾವಧಿಯ ಅನೇಕ ಪ್ರಾಣಿವರ್ಗ ಮತ್ತು ವಂಶಗಳು ಕೊನೆಯ ಬಾರಿಗೆ ಪ್ರತಿನಿಧಿಸಲ್ಪಟ್ಟಿವೆ. ಕೊನೆಯ ಟ್ರೈಲೊಬೈಟ್ ಪಿಲಿಪ್ಸಿಯ ಉತ್ತರ ಅಮೆರಿಕದ ಪರ್ಮಿಯನ್ ಸ್ತೋಮದಲ್ಲಿದೆ. ಇದೇ ಕಾಲದಲ್ಲಿ ಕೊನೆಯ ಸಿಸ್ಟಿಯನ್ ಗತವಂಶಿಯಾಯಿತು. ಬಹುಕಾಲದಿಂದಲೂ ಪ್ರತಿನಿಧಿಸಲ್ಪಟ್ಟಿದ್ದ ಪ್ರೊಡಕ್ಟಿಡೆ, ಆರ್ಕಿಡೆ ಮತ್ತು ಪೆಂಟಮೀರಿಡೆ ಎಂಬ ಬ್ರೇಕಿಯೊಪೊಡಗಳು ಕೊನೆಯ ಬಾರಿಗೆ ಪ್ರತಿನಿಧಿಸಲ್ಟಟ್ಟಿವೆ. ಮಧ್ಯಜೀವಿಕಲ್ಪದಲ್ಲಿ ಪ್ರಭಾವಸ್ಥಾನ ಹೊಂದಿದ್ದ ಪ್ರಾಣಿಗಳ ಉದಯವೂ ಆಯಿತು. ಮೆಡ್ಲಿಕಾಟಿಯ ಮತ್ತು ಪಾಪಿನೊಸೆರಾಸ್ ಎಂಬ ಅಮ್ಮೊನೈಟುಗಳೂ ಅಕ್ಯಾಂತಾಪ್ಟೆರಿಂಗಿಯನ್ ಎಂಬ ಮತ್ಸ್ಯವೂ ಎಲ್ಲಕ್ಕಿಂತ ಹೆಚ್ಚಾಗಿ ತೀರೊಮಾರ್ಫ ಎಂಬ ಸರೀಸೃಪವೂ ಈ ಕಾಲದಲ್ಲಿ ಮೊದಲಬಾರಿಗೆ ಕಾಣಿಸಿಕೊಂಡುವು ಇದೇ ಕಾಲದ ಲ್ಯಾಬ್ರಿಂತೊಡಾಂಟ್ ದ್ವಿಚರಪ್ರಾಣಿಗಳು ಅತಿಗಾತ್ರ ಉಳ್ಳವಾಗಿಯೂ ಕೆಲವು ದಿಶೆಗಳಲ್ಲಿ ಪ್ರಾವಿಣ್ಯ ಗಳಿಸಿದವಾಗಿಯೂ (ಆರ್ಕಿಗೊಸಾರಸ್) ಇದ್ದುವು.

ಪರ್ಮಿಯನ್ ಕಾಲದಲ್ಲಿ ಪ್ರೊಡಕ್ಟಸ್, ಸ್ಟಿರಿಫೆರ ಮೊದಲಾದ ಬ್ರೇಕಿಯೊಪೋಡುಗಳು ಮತ್ತು ಫೆನಷ್ಟೆಲ್ಲಾ ಮೊದಲಾದ ಬ್ರಯೊಜೋವಗಳು ಹೇರಳವಾಗಿದ್ದುವು. ನಿಯೊಸ್ಕಾಗಿರೈನ ಮತ್ತು ವರ್ಬಿಕಿನ ಎಂಬ ಫೊರಮಿನಿಫೆರಗಳಿಂದಾದ ಸುಣ್ಣಶಿಲೆಯೂ ಈ ಸ್ತೋಮದ ವೈಶಿಷ್ಟ್ಯ. ಆರ್ಕೊಸೆರಾಸ್ ಮತ್ತು ಗೋನಿಯಟೈಟಿಸ್ ಅಧಿಕ ಸಂಖ್ಯೆಯಲ್ಲಿದ್ದುವು. ಯೂರಿಡೆಸ್ಮ ಈ ಕಾಲದ ಒಂದು ಅಲ್ಪಾಯು ಫಾಸಿಲ್.

ಉತ್ತರ ಅಮೆರಿಕ : ಪರ್ಮಿಯನ್ ಸ್ತೋಮ ಉತ್ತರ ಅಮೆರಿಕ ಖಂಡದ ಪೂರ್ವ ಮತ್ತು ಮಧ್ಯಭಾಗಗಳಲ್ಲಿ ಪೆನ್ಸಿಲ್ವೇನಿಯನ್ ಸ್ತೋಮದ ಮೇಲೆ ಅನುರೂಪದಿಂದ ನಿಕ್ಷೇಪಗೊಂಡಿದೆ. ಆದ್ದರಿಂದ ಅದರ ಕೆಳಎಲ್ಲೆಯನ್ನು ಕರಾರುವಕ್ಕಾಗಿ ಎಳೆಯುವುದು ಅಸಾಧ್ಯ. ಆದರೆ ಮಾದರಿ ಪ್ರದೇಶಗಳಾಗಿ ಪಶ್ಚಿಮ ಟೆಕ್ಸಾಸ್ ಮತ್ತು ಮೆಕ್ಸಿಕೊದಲ್ಲಿ ಕೆಳಎಲ್ಲೆ ಸ್ಪಷ್ಟವಾಗಿದೆ. ಪರಿಚಯದ ಉದ್ದೇಶಕ್ಕಾಗಿ ಪರ್ಮಿಯನ್ ಸ್ತೋಮವನ್ನು ಈ ಮುಂದಿನ ಭೌಗೋಳಿಕ ಪ್ರದೇಶಗಳಾಗಿ ವಿಂಗಡಿಸಬಹುದು :

1 ಪಶ್ಚಿಮ ಟೆಕ್ಸಾಸ್ ಮತ್ತು ನ್ಯೂಮೆಕ್ಸಿಕೊ ಪ್ರದೇಶ
2 ಮಧ್ಯ ಮತ್ತು ನೈಋತ್ಯ ಖಂಡ ಪ್ರದೇಶ
3 ಪೂರ್ವ ಪ್ರದೇಶದ ಡಂಕಾರ್ಡ್ ಶಿಲಾಶ್ರೇಣಿ
4 ಪಶ್ಚಿಮ ಪ್ರಾಂತಗಳು

1 ಪಶ್ಚಿಮ ಟೆಕ್ಸಾಸ್ ಮತ್ತು ನ್ಯೂಮೆಕ್ಸಿಕೊ ಪ್ರದೇಶ : ಉತ್ತರ ಅಮೆರಿಕದ ಮಧ್ಯಭಾಗದಲ್ಲಿ ಸಾಗರಗಳು ಹಿಂಜರಿದರು ಈ ಪ್ರದೇಶ ಪರ್ಮಿಯನ್ ಯುಗದ ಬಲುಕಾಲದವರೆಗೆ ಸಾಗರಾಕ್ರಮಣಕ್ಕೆ ಒಳಗಾಗಿತ್ತು. ಆದ್ದರಿಂದ ಇಲ್ಲಿ 4265 ಮೀಟರುಗಳಷ್ಟು ನಿಕ್ಷೇಪವಾಗಿದೆ. ಇದನ್ನು ನಾಲ್ಕು ಶಿಲಾಶ್ರೇಣಿಗಳಾಗಿ ವಿಭಜಿಸಲಾಗಿದೆ :
4 ಒಕೂವ ಶ್ರೇಣಿ
3 ಗೌಡಲುಪೆ ಶ್ರೇಣಿ
2 ಲಿಯನಾರ್ಡೊ ಶ್ರೇಣಿ
1 ಉಲ್ಟ್‍ಕ್ಯಾಂಪ್ ಶ್ರೇಣಿ

ಉಲ್ಪ್‍ಕ್ಯಾಂಪ್ ಶ್ರೇಣಿ ತೀರದ ಉಪ್ಪು ಮತ್ತು ಜಿಪ್ಸಮ್ ನಿಕ್ಷೇಪಗಳಿಂದಲೂ ಆಳಪ್ರದೇಶದ ಸುಣ್ಣಶಿಲೆಗಳಿಂದಲೂ ಅವೆರಡರ ಮಧ್ಯೆ ತೆಳುಸುಣ್ಣ ಪದರುಗಳಿಂದಲೂ ಪ್ರತಿನಿಧಿಸಲ್ಪಟ್ಟಿದೆ. ಈ ಮೂರು ಬಗೆಯ ನಿಕ್ಷೇಪಗಳು ಪರಸ್ಪರ ಹೆಣೆದುಕೊಂಡಿವೆ. ಇಲ್ಲಿಯ ಶಿಲೆಗಳಲ್ಲಿ ಫಾಸಿಲುಗಳು ಹೇರಳವಾಗಿವೆ. (ಸ್ಪಾಂಜ್, ಆಲ್ಗಿ, ಬ್ರಯಜೋವ ಮತ್ತು ಹವಳಗಳು) ಸೂಡೊಸ್ಕ್ವಾಗಿರೈನ ಇದರ ವಿಶಿಷ್ಟ ಫಾಸಿಲ್.

ಗೌಡಲುಪೆ ಪ್ರದೇಶದಲ್ಲಿ ಲಿಯನಾರ್ಡೊ ಶ್ರೇಣಿ ಸಂಪೂರ್ಣವಾಗಿ ಸಾಗರಜನಿತವಾದುದು. ಅದು ಕೆಲವು ಕಡೆ ಜೇಡುಗಳಿಂದಲೂ ಮತ್ತೆ ಕೆಲವು ಕಡೆ ಸುಣ್ಣಶಿಲೆಗಳಿಂದಲೂ ಕೂಡಿದೆ. ಗೌಡಲುಪೆ ಶ್ರೇಣಿ ದಿಲ್ವಾರ ಪ್ರದೇಶದಲ್ಲಿ ಚೆನ್ನಾಗಿ ರೂಪುಗೊಂಡಿದೆ. ಅದರಲ್ಲಿ ತೀರ, ಮಧ್ಯ ಮತ್ತು ಆಳ ನಿಕ್ಷೇಪಗಳಿವೆ. ಒಕೋವ ಶ್ರೇಣಿ ಉಪ್ಪು, ಅನೈಡ್ರೈಟ್ ಮತ್ತು ರಂಜಕ ನಿಕ್ಷೇಪಗಳಿಗೆ ಹೆಸರಾಗಿದೆ. ಈ ನಿಕ್ಷೇಪಗಳು ದಪ್ಪ ಸುಮಾರು 1,220 ಮೀಟರುಗಳು. ಇವುಗಳ ಮೇಲೆ ಭೂ ನಿಕ್ಷೇಪ ನಡೆದಿದೆ.
ಖಂಡಮಧ್ಯ ಪ್ರದೇಶ : ಉಲ್ಪ್‍ಕ್ಯಾಂಪಿಯನ್ ಶ್ರೇಣಿ ನಿಕ್ಷೇಪವಾಗುತ್ತಿದ್ದಾಗ ಓಕ್ಲಹಾಮದಿಂದ ನೆಬ್ರಾಸ್ಕದವರೆಗಿನ ಪ್ರದೇಶ ತೆಟ್ಟೆ ಸಮುದ್ರದಿಂದ ಆಕ್ರಮಿಸಲ್ಪಟ್ಟಿತು. ಅಲ್ಲಿ ಸುಣ್ಣಶಿಲೆ, ಜೇಡುಶಿಲೆ ಮತ್ತು ಕೆಂಪುಶಿಲಾಪದರಗಳು ಪುನರಾವೃತ್ತಿಯನ್ನು ಅನೇಕ ಬಾರಿ ಕಾಣಬಹುದು. ಇದರಿಂದ ಸಾಗರದ ನಿರ್ಗಮನ ಮತ್ತು ಆಕ್ರಮಣಗಳು ಪದೇ ಪದೇ ನಡೆದಿವೆ ಎಂದು  ಅರ್ಥವಾಗುತ್ತದೆ. ಲಿಯೊನಾರ್ಡೊ ಮತ್ತು ಗೌಡಲುಪೆ ಕಾಲಗಳಲ್ಲಿ ಭೂನಿಕ್ಷೇಪ ನಡೆದಿದೆ. ಇವುಗಳಲ್ಲಿ ಸರೀಸೃಪಗಳ ಮತ್ತು ದ್ವಿಚರಪ್ರಾಣಿಗಳ ಅವಶೇಷಗಳಿವೆ. ಈ ನಿಕ್ಷೇಪಗಳು ಮಧ್ಯೆ ತೆಳುವಾದ ಸಾಗರನಿಕ್ಷೇಪಗಳೂ ಉಂಟು. ಲಿಯನಾರ್ಡೊ ಶಿಲೆಗಳ ಮೇಲೆ ಬ್ಲೆನಿ ಎಂಬ ಹೆಸರಿನ ಜಿಪ್ಸಮ್ ನಿಕ್ಷೇಪವಿದೆ.

ಡಂಕಾರ್ಡ್ ಶಿಲಾಶ್ರೇಣಿ : ಅಪಲೇಚಿಯನ್ ನಿಕ್ಷೇಪಪ್ರದೇಶದಲ್ಲಿ ಪೆನ್ಸಿಲ್ವೇನಿಯನ್ ಸ್ತೋಮಗಳ ಮೇಲೆ ಮರಳುಶಿಲೆಗಳೂ ಮರಳು ಮಿಶ್ರ ಜೇಡುಶಿಲೆಗಳೂ ಅನುರೂಪದಿಂದ ನಿಕ್ಷೇಪಗೊಂಡಿವೆ. ಇವುಗಳಲ್ಲಿ ಸುಣ್ಣಶಿಲೆ ಮತ್ತು ಕಲ್ಲಿದ್ದಲು ಪದರಗಳಿವೆ. ಇವೇ ಡಂಕಾರ್ಡ್ ಶಿಲಾಶ್ರೇಣಿಗಳು. ಇವು ಭೂನಿಕ್ಷೇಪಗಳು. ಇವುಗಳ ಬಣ್ಣ ಕೆಂಪು. ಇವುಗಳಲ್ಲಿ ಲಿಂಗ್ಯುಲ ಮತ್ತು ಷಾರ್ಕ್ ಮೀನುಗಳ ಫಲಕಗಳಿರುವುದರಿಂದ ಈ ಸ್ಥಳ ಸ್ವಲ್ಪಕಾಲ ಸಮುದ್ರಸಂಪರ್ಕ ಹೊಂದಿದ್ದಿರಬೇಕೆಂದು ಹೇಳಬಹುದು. 
ಪಶ್ಚಿಮಪ್ರಾಂತಗಳು : ಒರೆಗಾನ್, ವಾಷಿಂಗಟನ್ ಮತ್ತು ಬ್ರಿಟಿಷ್ ಕೊಲಂಬಿಯಾದ ಕೆಲವು ಭಾಗಗಳಲ್ಲಿ ಪೆಸಿಫಿಕ್ ಸಾಗರದಿಂದ ಆಕ್ರಮಣ ನಡೆದಿದೆ. ಆ ನಿಕ್ಷೇಪಗಳಲ್ಲಿ ಏಷ್ಯಖಂಡದ ಫಾಸಿಲುಗಳು ಇವೆ. ಇವು ಉತ್ತರ ಅಮೆರಿಕ ಖಂಡದ ಮತ್ತಾವ ಭಾಗಗಳಲ್ಲೂ ಇಲ್ಲ.

ಇಂಡಿಯ : ಪರ್ಮಿಯನ್ ಸ್ತೋಮಗಳು ಸಾಲ್ಟ್‍ರೇಂಜ್, ಕಾಶ್ಮೀರ ಮತ್ತು ಸ್ಪಿಟಿ ಪ್ರದೇಶಗಳಲ್ಲಿ ಉತ್ತಮ ರೀತಿಯಲ್ಲಿ ರೂಪುಗೊಂಡಿವೆ. ಸ್ಪಿಟಿಯಲ್ಲಿ ಕಾರ್ಬಾನಿಫೆರಸ್ ಅಂತ್ಯಕಾಲದ ನೀರ್ಗಲ್ಲುನದಿ ನಿಕ್ಷೇಪವಾದ ಗುಂಡುಶಿಲೆಯ ಮೇಲೆ ಸುಣ್ಣ ಮಿಶ್ರ ಮರಳು ಶಿಲೆಯೂ ಅದರ ಮೇಲೆ ಇಂಗಾಲ ಮತ್ತು ಮರಳಿನ ಅಂಶಗಳಿಂದ ಕೂಡಿದ ಕಪ್ಪು ಅಥವಾ ಕಂದುಬಣ್ಣದ ಜೇಡುಶಿಲೆಯೂ ಇವೆ. ಜೇಡುಶಿಲೆ 30-60 ಮೀಟರ್ ದಪ್ಪ ಇದೆ. ಇದರಲ್ಲಿ ಹೇರಳವಾದ ಪ್ರೊಡಕ್ಟಸ್ ಅವಶೇಷಗಳಿವೆ. ಈ ಶಿಲಾವಲಯ ಕಾಶ್ಮೀರ, ಸ್ಪಿಟಿ, ಕುಮಾಂವ್, ನೇಪಾಳ ಮುಂತಾದ ಅನೇಕ ಕಡೆ ರೂಪುಗೊಂಡು ಪರ್ಮಿಯನ್ ಯುಗದ ವಿಶಿಷ್ಟ ಜೀವರಾಶಿಯ ಆಕರವಾಗಿದೆ. ತುದಿಯಿಂದ 9 ಮೀಟರ್ ಕೆಳಗೆ ಸೆಫಲೊಪಾಡ್ ಫಾಸಿಲುಗಳನ್ನು ಒಳಗೊಂಡಿರುವ 30 ಸೆಂಮೀ ದಪ್ಪದ ಪದರವಿದೆ. ಈ ಸ್ತೋಮದಲ್ಲಿ ಪ್ರೊಡಕ್ಟಸ್ ಸ್ಪಿರಿಫೆರ ಮೊದಲಾದ ಬ್ರೇಕಿಯೋಪೊಡಗಳೂ ಸೈಕ್ಲೋಬಸ್, ಹಯಡೋನಿ ಮೊದಲಾದ ಸೆಫಲೋಪೊಡಗಳೂ ಇವೆ. 

ಹರ್ಷೀನಿಯನ್ ಪ್ರಳಯ ಕಾಶ್ಮೀರ ಪ್ರದೇಶವನ್ನು ಭೂಮಟ್ಟಕ್ಕೆ ತಂದು ಅದನ್ನು ಜ್ವಾಲಾಮುಖಿಗಳ ಕಾರ್ಯಚಟುವಟಿಕೆಯ ಕೇಂದ್ರವಾಗಿ ಪರಿವರ್ತಿಸಿತು. ಈ ಕಾರ್ಯಮೊದಲು ಆಸ್ಫೋಟನ ರೀತಿಯದಾಗಿತ್ತು. ಆಲ್ಲಿ ಶಿಲಾಚೂರುಗಳು ಮೇಲೊಗೆಯಲ್ಪಟ್ಟು ರಾಶಿರಾಶಿಯಾಗಿ ಬಿದ್ದಿವೆ. ಇವುಗಳಿಗೆ ಅಗ್ಲಾಮರೆಟಿಕ್ ಸ್ಲೇಟುಗಳೆನ್ನುವರು. ಅನಂತರ ಶಿಲಾರಸ ಉಗುಳುವಿಕೆ ಪ್ರಾರಂಭವಾಗಿ ಪರ್ಮಿಯನ್ ಯುಗದ ಆದಿಯಲ್ಲಿ ತೀವ್ರಗತಿ ಮುಟ್ಟಿದ ತರುವಾಯ ಕ್ರಮೇಣ ಇಳಿಮುಖವಾಯಿತು. ಈ ಜ್ವಾಲಾಮುಖಿಜ ಶಿಲೆಗಳಿಗೆ ಪಂಜಾಲ್‍ಟ್ರಾಪ್ ಎಂದು ಹೆಸರು. ಜ್ವಾಲಾಮುಖಿಜ ಶಿಲಾಪದರಗಳಲ್ಲಿ ಕೆಲವೆಡೆ ಸಸ್ಯಾವಶೇಷಗಳಿಂದ ಕೂಡಿದ ಜಲಜ ಶಿಲೆಗಳಿವೆ. ಇವುಗಳಲ್ಲಿರುವ ಸಸ್ಯಗಳಲ್ಲಿ ಗ್ಲಾಸಾಪ್ಟರಿಸ್ ಇಂಡಿಕ ಮತ್ತು ಗಂಗಮಾಪ್ಟರಿಸ್ ಕಾಶ್ಮೀರೆನ್ಸಿಸ್ ಮುಖ್ಯವಾದವು. ಈ ಶಿಲೆಗಳಿಗೆ ಗಂಗಮಾಪ್ಟರಿಸ್ ಪದರಗಳು ಎಂದು ಹೆಸರು. ಒಂದು ಕಡೆ ಜ್ವಾಲಾಮುಖಿ ಕಾರ್ಯಚರಣೆ ಆಗುತ್ತಿದ್ದರೆ ಮತ್ತೊಂದು ಕಡೆ ಸಮುದ್ರಾಕ್ರಮಣವಾಯಿತು. ಆದ್ದರಿಂದ ಜ್ವಾಲಾಮುಖಿಜ ಶಿಲೆಗಳನ್ನು ಮತ್ತು ಸಾಗರನಿಕ್ಷೇಪಗಳನ್ನು ಅಕ್ಕಪಕ್ಕದಲ್ಲಿ ಕಾಣುವೆವು. ಸಾಗರಜನಿತ ಶಿಲೆಗಳಿಗೆ ಝಿವಾನ್ ಪದರಗಳೆಂದು ಹೆಸರು. ಝಿವಾನ್ ಮತ್ತು ಬಾರುಸ್ ಎಂಬ ಸ್ಥಳಗಳಲ್ಲಿ ಪ್ರೋಟೊರೆಟಿಫೊರ ಆಮ್ಟ ಎಂಬ ಬ್ರಯಜೋವ, ಪರ್ಮಿಯನ್ ಯುಗದ ವಿಶಿಷ್ಟ ಬ್ರೇಕಿಯೋಪೋಡಗಳು ಮತ್ತು ಹವಳಗಳ ಗುಂಪಿಕೆ ಸೇರಿದ ಪ್ರಾಣಿಗಳ ಅವಶೇಷಗಳು ಇರುವ ಜಲಶಿಲೆಗಳಿವೆ. ಈ ಪ್ರಾಣಿವರ್ಗ ಸಾಲ್ಟ್‍ರೆಂಜ್ ಪ್ರದೇಶದ ಪ್ರೊಡಕ್ಷನ್ ಸುಣ್ಣಶಿಲಾಸಮುದಾಯದ ಮೇಲುಭಾಗದ ಪ್ರಾಣಿವರ್ಗವನ್ನು ಹೋಲುತ್ತದೆ.

ಸಾಲ್ಟ್‍ರೇಂಜ್ ಪ್ರದೇಶದಲ್ಲಿ ಕಾರ್ಬಾನಿಫೆರಸ್ ಯುಗದ ಆಲೀವ್ ಶಿಲಾವರ್ಗ ಮತ್ತು ಚುಕ್ಕೆಮರಳು ಶಿಲಾವರ್ಗದ ಮೇಲೆ ಪರ್ಮಿಯನ್ ಸ್ತೋಮ ಅನುರೂಪದಿಂದ ನಿಕ್ಷೇಪಗೊಂಡಿದೆ. ಇದು ಭಾರತದ ಭೂಇತಿಹಾಸದಲ್ಲಿ ಮುಖ್ಯವಾದ ನಿಕ್ಷೇಪ. ಭಾರತದ ಭೂವಿಜ್ಞಾನಿಗಳಿಗೆ ಫಾಸಿಲ್‍ಭರಿತ ಶಿಲಾವರ್ಗಗಳಲ್ಲಿ ಮೊದಲು ಗೋಚರವಾದುದು ಇದೇ ಆದ್ದರಿಂದ ಇದು ಹೆಚ್ಚು ಪರಿಶೋಧಿಸಲ್ಪಟ್ಟಿದೆ. ಸಾಲ್ಟ್ ರೇಂಜಿನ ಪಶ್ಚಿಮ ಮತ್ತು ಮಧ್ಯಭಾಗಗಳಲ್ಲಿ ಉತ್ತಮವಾಗಿ ರೂಪುಗೊಂಡು ಪೂರ್ವಕ್ಕೆ ಬಂದ ಹಾಗೆಲ್ಲ ತೆಳುವಾಗುತ್ತದೆ. ಇದು ಪ್ರಪಂಚದ ಪರ್ಮಿಯಾನ್ ಯುಗದ ಸಾಗರನಿಕ್ಷೇಪಗಳಲ್ಲೆಲ್ಲ ಅತ್ಯಂತ ಉತ್ತಮ ರೀತಿಯಲ್ಲಿ ರೂಪುಗೊಂಡು ಹೆಸರುವಾಸಿಯಾಗಿದೆ. ಈ ಶಿಲಾಸಮುದಾಯ ಮುಖ್ಯವಾಗಿ ಸುಣ್ಣಶಿಲೆಯಿಂದ ಕೂಡಿ ಹೇರಳವಾದ ಫಾಸಿಲುಗಳಲ್ಲಿಯೂ ದೊರೆಯುವುದರಿಂದ ಇದಕ್ಕೆ ಪ್ರೊಡಕ್ಟಸ್ ಸುಣ್ಣಶಿಲೆ ಎಂದು ಹೆಸರಾಗಿದೆ. ಈ ಶಿಲಾಸ್ತೋಮವನ್ನು ಮೂರು ಭಾಗಗಳಾಗಿ ವಿಂಗಡಿಸಿದೆ. ಪುನಃ ಕೆಳಭಾಗವನ್ನು ಅಂಬ್ ಮತ್ತು ಕಟ್ಟ ಎಂಬ ಎರಡು ಭಾಗಗಳಾಗಿಯೂ ಮಧ್ಯಭಾಗವನ್ನು ವಿರ್ಗಲ್ ಮತ್ತು ಕಲಬಾಗ್ ಎಂಬ ಎರಡು ಭಾಗಗಳಾಗಿಯೂ ಮೇಲ್ಭಾಗವನ್ನು ಕುಂದಫಾಟ್ ಜಬ್ಬಿ ಮತ್ತು ಚಿದ್ರು ಎಂಬ ಮೂರು ಭಾಗಗಳಾಗಿಯೂ ವಿಂಗಡಿಸಿದೆ.
(ಡಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ